ಮರವಂತೆ:ಗ್ರಾಮಾಭಿವೃದ್ಧಿ ಸಾಧಿಸಲು ಗ್ರಾ.ಪಂ.ಗಳಿಗೆ ವಿಪುಲ ಅವಕಾಶ : ಎಸ್. ನರಸಿಂಹ ಕಾಮತ್
gulfkannadiga.com
ಮರವಂತೆ : ಗ್ರಾಮೀಣ ಅಭಿವೃದ್ಧಿ ಸಾಧಿಸುವ ಮೂಲಕ ಗ್ರಾಮಜೀವನದಲ್ಲಿ ಅಪೇಕ್ಷಿತ ಬದಲಾವಣೆ ತರಲು ಗ್ರಾಮ ಪಂಚಾಯಿತಿಗಳಿಗೆ ಹಲವು ಶಾಸನಬದ್ಧ ಅಧಿಕಾರ ಮತ್ತು ಅವಕಾಶಗಳಿವೆ. ಅದಕ್ಕೆ ಪೂರಕವಾದ ಹಲವು ಯೋಜನೆಗಳೂ ಲಭ್ಯ ಇವೆ. ಅದರೆ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಅದರಲ್ಲಿ ಜನಸಹಭಾಗಿತ್ವ ಅತ್ಯಂತ ನಿರ್ಣಾಯಕ. ಅದು ಲಭಿಸಬೇಕಾದರೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವಾಗ ಸ್ವಂತ ಚಿಂತನೆಯಿಂದ ಹೊಮ್ಮುವ ಪೂರಕವೆನಿಸುವ ನಾವೀನ್ಯತಾ ಪ್ರಯೋಗಗಳನ್ನು ಅದರೊಂದಿಗೆ ಅಳವಡಿಸಿಕೊಳ್ಳಬೇಕು ಎಂದು ನೀರು ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ಅಂತಾರಾಷ್ಟ್ರೀಯ ಗೂಗಲ್ ಪ್ರಶಸ್ತಿ ಗಳಿಸಿದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್. ನರಸಿಂಹ ಕಾಮತ್ ಹೇಳಿದರು.
ತಮ್ಮ ಗ್ರಾ.ಪಂ. ಸದಸ್ಯರ ಮತ್ತು ಅಧಿಕಾರಿಗಳ ತಂಡದ ನೇತೃತ ವಹಿಸಿ ಜೂನ್ ೫ರಂದು ಮರವಂತೆ ಗ್ರಾಮ ಪಂಚಾಯತ್ಗೆ ಅಧ್ಯಯನ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ಪಂಚಾಯತ್ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ನೀರು ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ತಮ್ಮ ಗ್ರಾಮ ಪಂಚಾಯತ್ ಅನುಸರಿದ ಕ್ರಮಗಳನ್ನು ಅವರು ವಿವರಿಸಿದರು.
ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್. ಜನಾರ್ದನ ಮಾತನಾಡಿ ಗ್ರಾಮಾಭಿವೃದ್ಧಿಗೆ ಪೂರಕವಾಗುವ ಸರ್ವಕುಟುಂಬ ಸಮೀಕ್ಷೆ, ಸ್ವಚ್ಛ ಗ್ರಾಮ ಯೋಜನೆ, ಸ್ವಜಲಧಾರಾ ಯೋಜನೆ, ಸಂಪೂರ್ಣ ಸ್ವಚ್ಛತಾ ಆಂದೋಲನ, ಜನತಾ ಜೀವವೈವಿಧ್ಯ ದಾಖಲಾತಿ, ಶೇ.೧೦೦ ಕರಸಂಗ್ರಹ, ವಿದ್ಯುತ್ ನಿರ್ವಹಣೆ ಮತ್ತು ಆಡಳಿತದಲ್ಲಿ ಮಿತವ್ಯಯ ಸಾಧನೆ, ಪಾರದರ್ಶಕತೆ, ಪಂಚಾಯತ್ ರಾಜ್ ಕಾಯಿದೆಯ ಕಟ್ಟುನಿಟ್ಟಿನ ಅನುಸರಣೆ ತಮ್ಮ ಪಂಚಾಯತ್ನ ವಿಶೇಷ ಸಾಧನೆಗಳು ಎಂದು ಹೇಳಿದರು.
ಅಭಿವೃದ್ಧಿ ಅಧಿಕಾರಿಗಳಾದ ಬಾಲಕೃಷ್ಣ ಶೆಣೈ, ಹರೀಶಕುಮಾರ ಶೆಟ್ಟಿ ಪೂರಕ ಮಾಹಿತಿಗಳನ್ನು ಒದಗಿಸಿದರು. ನಡೆದ ವಿಚಾರ ವಿನಿಮಯದಲ್ಲಿ ಮರವಂತೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್, ಉಪಾಧ್ಯಕ್ಷೆ ಶ್ರೀಮತಿ ಆಚಾರ್ಯ, ಸದಸ್ಯರಾದ ರಾಮಕೃಷ್ಣ ಖಾರ್ವಿ, ಅನಿತಾ, ಲಕ್ಷ್ಮೀ ಖಾರ್ವಿ, ಕಾರ್ಯದರ್ಶಿ ವೈ.ಡಿ. ನಿರಂಜನ, ಸಾಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಆರ್. ಅಮೀನ್, ಸದಸ್ಯರಾದ ಕರುಣಾಕರ ಕೋಟ್ಯಾನ್, ದತ್ತಾತ್ರೆಯ ರಾವ್, ಭಾರತ ನಿರ್ಮಾಣ ಅಭಿಯಾನದ ಸ್ವಯಂಸೇವಕಿ ರೇಖಾ ಶೆಣೈ, ರಾಜೇಶ್ವರಿ ಭಾಗವಹಿಸಿದರು. ಉಭಯ ಪಂಚಾಯತ್ ಸದಸ್ಯರಾದ ಎಂ. ನರಸಿಂಹ ಶೆಟ್ಟಿ, ಆನಂದ ಪೂಜಾರಿ, ಸುಗುಣಾ, ರೋಹಿಣೆ ದೇವಾಡಿಗ, ಸುಗುಣಾ ಕೆ. ಎ, ಯುವರಾಜ ಜೈನ್, ಗಿರಿಜಾ, ನರ್ಸಿ, ರೇಖಾ ಕೋಟ್ಯಾನ್, ಸದಾಶಿವ, ಸಿಬಂದಿಗಳಾದ ಶೇಖರ ಎಂ, ಪ್ರಭಾಕರ, ರಮೇಶ, ರಿಚರ್ಡ್ ಹಾಜರಿದ್ದರು. ಎರಡು ಗ್ರಾಮ ಪಂಚಾಯತ್ ನಡುವೆ ನಿರಂತರ ವಿಚಾರ ವಿನಿಮಯದಿಂದ ಉಭಯರಿಗೂ ಲಭಿಸುವ ಲಾಭವನ್ನು ಮನಗಾಣಲಾಯಿತು.
Please fill in the form below with correct details
* mark fields are compulsory
|
|
Comments on this article:0
|
|
|
|