ಬ್ರಹ್ಮಾವರ : ಸ್ವ ಉದ್ಯೋಗವನ್ನು ಆರಂಭಿಸಿ, ಮುನ್ನಡೆಸುವಾಗ, ವ್ಯವಹರಿಸುವಾಗ ಉತ್ತಮ ಶಿಸ್ತು ಮತ್ತು ವ್ಯವಹಾರ ಜ್ಞಾನವನ್ನು ಅಳವಡಿಸಿಕೊಂಡರೆ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯ ಎಂದು ಉಡುಪಿ ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಕಛೇರಿ ಉಪ ಮಹಾ ಪ್ರಬಂಧಕರಾದ ಶ್ರೀ ಆರ್. ಸುಬ್ರಮಣಿಯವರು ಅಭಿಪ್ರಾಯಪಟ್ಟರು.

ಇವರು ನಬಾರ್ಡ್, ಪ್ರಾದೇಶಿಕ ಕಛೇರಿ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ರುಡ್ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ೩೦ದಿನಗಳ ಕಾಲ ನಡೆದ ಗೃಹ ಉಪಯೋಗಿ ವಸ್ತುಗಳ ದುರಸ್ತಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತ ಪ್ರಾಮಾಣಿಕತೆಯಿಂದ ವ್ಯವಹರಿಸಿ ಯಶಸ್ಸು ಪಡೆಯಿರಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಡಿ. ನೇರ್ಲೆಕರ್ರವರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗೃಹ ಉಪಯೋಗಿ ವಸ್ತುಗಳ ದುರಸ್ತಿ ಕೆಲಸವು ಬಹಳ ಬೇಡಿಕೆಯ ಉದ್ಯೋಗವಾಗಿ ಬೆಳೆಯುತ್ತಿದೆ ಈ ಅವಕಾಶವನ್ನು ಕ್ರಿಯಾಶೀಲರಾಗಿ ಬಳಸಿಕೊಂಡು ಉದ್ಯಮದಲ್ಲಿ ಯಶಸ್ಸನ್ನು ಕಂಡುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪೆರಡೂರು ಸರಕಾರಿ ಐ.ಟಿ.ಐ ಕಾಲೇಜಿನ ಉಪನ್ಯಾಸಕರಾದ ಶ್ರೀ ಕೃಷ್ಣಾರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಬಸವರಾಜ್ ಎಸ್. ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿ, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಕಛೇರಿ ಸಹಾಯಕರಾದ ಶ್ರೀ ಮಧ್ವರಾಜ್ ಭಟ್ವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
30 ದಿನಗಳ ಕಾಲ ನಡೆದ ಈ ತರಬೇತಿಯಲ್ಲಿ ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಬಂದ 42 ಮಂದಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದರು.