ಮರವಂತೆ: ಅನ್ಯರನ್ನು ಸಂತೋಷ ಪಡಿಸಲು ನಮ್ಮ ಆಚಾರ, ನಡೆ, ನುಡಿಗಳನ್ನು ತ್ಯಜಿಸುವ ಪ್ರವೃತ್ತಿಯಿಂದ ನಮ್ಮತನ ನಶಿಸುತ್ತದೆ. ಇದಕ್ಕೆ ಸಾಮಾಜಿಕ ಸಂಘಟನೆಗಳು ತಡೆ ಹಾಕಿ ಪ್ರತೀ ಸಮುದಾಯಕ್ಕೂ ಅನನ್ಯವೆನಿಸುವ ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದು ಸಾಲಿಗ್ರಾಮ ಮಕ್ಕಳಮೇಳದ ಸಂಚಾಲಕ ಎಚ್. ಶ್ರೀಧರ ಹಂದೆ ಹೇಳಿದರು.
ಇತ್ತೀಚೆಗೆ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆದ ಸಾಲಿಗ್ರಾಮ ಕೂಟ ಮಹಾಜಗತ್ತಿನ ಕಿರಿಮಂಜೇಶ್ವರ ಅಂಗ ಸಂಸ್ಥೆಯ ೧೪ನೆಯ ವಾರ್ಷಿಕ ಸಭೆ ಹಾಗೂ ಯುವ ಮತ್ತು ಮಹಿಳಾ ವೇದಿಕೆಗಳ ವಾರ್ಷಿಕ ಅಧಿವೇಶನದ ಸಂಜೆಯ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು.
ಒಂದು ಸಮುದಾಯ ತನ್ನತನ ಉಳಿಸಿಕೊಂಡು ಅನ್ಯರಿಂದ ಗೌರವ ಗಳಿಸುವುದು ಸಾಧ್ಯ. ಈ ದಿಸೆಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ನಿರ್ವಹಿಸಬೇಕು. ಯುವ ಪೀಳಿಗೆಯನ್ನು ಆ ದಾರಿಯಲ್ಲಿ ಮುನ್ನಡೆಸುವ ಹೊಣೆ ಅವರ ಮೇಲಿದೆ ಎಂದು ಅವರು ನುಡಿದರು.
ಅಂಗ ಸಂಸ್ಥೆಯ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ನಾವಡ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ಎರಡು ಚಿನ್ನದ ಪದಕ ಗಳಿಸಿದ ಉಪ್ಪುಂದ ಸುಬ್ರಹ್ಮಣ್ಯ ಮಯ್ಯ, ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಬಿಜೂರು ಗಣೇಶ ಮಯ್ಯ, ಮಹಿಳಾ ಸಮಾಜ ಸೇವಕಿ ಗುಜ್ಜಾಡಿ ಕೆಳಾಮಠ ಮಹಾಲಕ್ಷ್ಮೀ ಐತಾಳ ಅವರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ಕೊಡೇರಿ ವಾಸುದೇವ ಕಾರಂತ ಸ್ವಾಗತಿಸಿದರು. ಜೋಷಿ ರಾಮಕೃಷ್ಣ ಕಾರಂತ, ವಾಸುದೇವ ಮಯ್ಯ, ಗಿರಿಜಾ ಮಯ್ಯ ಸನ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕಿ ಪೂರ್ಣಿಮಾ ಎನ್. ಜೋಷಿ ಮತ್ತು ಯುವ ವೇದಿಕೆಯ ಅಧ್ಯಕ್ಷ ಯು. ವೆಂಕಟೇಶ ವೈದ್ಯ ನಿರೂಪಿಸಿದರು. ಅಂಗ ಸಂಸ್ಥೆಯ ಕಾರ್ಯದರ್ಶಿ ಕೆ. ಮಂಜುನಾಥ ಹೊಳ್ಳ ವಂದಿಸಿದರು. ನಿಯೋಜಿತ ಅಧ್ಯಕ್ಷ ಬಿ. ಸಿ. ಗಣೇಶ ಮಯ್ಯ ವೇದಿಕೆಯಲ್ಲಿದ್ದರು.