ಕೊಕ್ಕರ್ಣೆ ಪದವಿ ಪೂರ್ವ ಮತ್ತು ಪ್ರೌಢಶಾಲಾ ವಿಭಾಗಗಳು, ಒಂದೇ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 100ಕ್ಕೆ 100 ಫಲಿತಾಂಶ ದಾಖಲಿಸಿ, ರಾಜ್ಯದಲ್ಲಿ ಪ್ರಥಮ ಎನ್ನುವ ಹೆಗ್ಗಳಿಕೆಗೆ ಪ್ರಾಪ್ತವಾಗಿದ್ದರ ಪ್ರಯುಕ್ತ, ಶಾಲಾಭಿವೃದ್ಧಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಗಳು ಜಂಟಿಯಾಗಿ ಎರಡೂ ವಿಭಾಗದ ವಿಧ್ಯಾರ್ಥಿಗಳನ್ನು ಕೊಕ್ಕರ್ಣೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸಮ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಿ. ಶ್ರೀನಿವಾಸ ಹೆಗ್ಡೆ ವಹಿಸಿದ್ದರು. ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮಾತನಾಡಿ ಸರಕಾರಿ ಸಂಸ್ಥೆಯ ಸಾಧನೆಯನ್ನು ಪ್ರಶಂಸಿಸಿ, ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು. ನಿವೃತ್ತ ಪ್ರಾಂಶುಪಾಲರಾದ ಎಂ.ಆರ್. ಕೇಶವಮೂರ್ತಿ ಮಾತನಾಡಿ ಸಂಸ್ಥೆಯ ಬೆಳವಣಿಗೆಯನ್ನು ಎಳೆಎಳೆಯಾಗಿ ವಿದ್ಯಾಭಿಮಾನಿಗಳ ಮುಂದಿಟ್ಟರು. ವೇದಿಕೆಯಲ್ಲಿ ಜಿ. ಪಂ. ಸದಸ್ಯೆ ಗೋಪಿ ಕೆ. ನಾಯ್ಕ, ತಾ.ಪಂ ಉಪಾಧ್ಯಕ್ಷೆ ಬೇಬಿ ಎಸ್. ಪೂಜಾರಿ, ತಾ. ಪಂ. ಸದಸ್ಯೆ ಡಾ| ಸುನೀತಾ ಡಿ. ಶೆಟ್ಟಿ, ಗ್ರಾ. ಪಂ. ಉಪಾಧ್ಯಕ್ಷೆ ಅಂಬಾ ಶೆಡ್ತಿ ಉಪಸ್ಥಿತರಿದ್ದರು
ಉಪನ್ಯಾಸಕ ಪ್ರಕಾಶ್ ಶೆಟ್ಟಿ, ರಾಘವೇಂದ್ರ ಅಡಿಗ, ಮಂಜುನಾಥ ಶೆಟ್ಟಿ ಸಮ್ಮಾನ ಪತ್ರಗಳನ್ನು ವಾಚಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ ಶೆಟ್ಟಿ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಯಶ್ರೀ ಜಿ. ಪ್ರಾಸ್ತಾವಿಕ ಮಾತನಾಡಿದರು. ಶಿರೂರು ಶ್ರೀಧರ ಶೆಟ್ಟಿ ವಂದಿಸಿ, ರಾಘವೇಂದ್ರ ಚಾತ್ರಮಕ್ಕಿ ಕಾರ್ಯಕ್ರಮ ನಿರೂಪಿಸಿದರು.