ಶಾಲೆಯಲ್ಲಿ ಓದಿ ಒಳ್ಳೆಯ ಅಂಕ ಗಳಿಸಿದರೆ ಸಾಕು, ಉತ್ತಮ ಕೆಲಸ ಸಿಗುತ್ತದೆ ಎಂಬ ಭ್ರಮೆ ಬೇಡ. ಶಾಲೆಯ ಓದಿನಷ್ಟೇ ಪಠ್ಯೇತರ ಚಟುವಟಿಕೆಗಳು ಕೂಡಾ ಪ್ರತಿಮಗುವಿನ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿ ದೆಸೆಯಿಂದಲೇ ಒಳ್ಳೆಯ ಹವ್ಯಾಸಗಳು ಸತತ ಅಭ್ಯಾಸ ರೂಪದಲ್ಲಿ ಮೂಡಿಸುವುದೇ ಈ ರಜಾಮಜಾ ಶಿಬಿರದ ಮೂಲ ಉದ್ದೇಶವಾಗಿದೆ. ಅಲ್ಲದೇ ಮಕ್ಕಳಿಗೆ ಸಾಂಸ್ಕೃತಿಕ ಪ್ರಜ್ಞೆ ಹಾಗೂ ಸ್ವಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಇಂತಹ ರಜಾ ಮಜಾ ಶಿಬಿರಗಳು ತುಂಬಾ ಪರಿಣಾಮಕಾರಿಯಾಗಲಿ ಎಂದು ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಜಿ. ಜೋನ್ಸನ್ ಅಭಿಪ್ರಾಯ ಪಟ್ಟರು. ಅವರು ಇತ್ತೀಚೆಗೆ ಕೋಸ್ಮೋಪಾಲಿಟನ್ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ ಇಲ್ಲಿ ಅಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡಮಿ ಇವರ ಸಂಯುಕ್ತ ಆಶ್ರಯದಲ್ಲಿ 3 ದಿನಗಳ ರಜಾಮಜಾ ಶಿಬಿರಗಳನ್ನು ಉದ್ಘಾಟಿಸಿ ಮಾತನಾಡಿದರು.

ಫಾದರ್ ಜಿ.ಎಂ. ಸ್ಕರಿಯಾ ಸಂಚಾಲಕರು ಓ.ಎಸ್.ಸಿ ಎಜ್ಯುಕೇಶನ್ ಸೊಸೈಟಿ ಬ್ರಹ್ಮಾವರ ಇವರು ಅಧ್ಯಕ್ಷತೆ ವಹಿಸಿ ಮಕ್ಕಳ ಪ್ರತಿಭೆ ಗುರುತಿಸುವ ಮತ್ತು ಇಂತಹ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಇತ್ತೀಚಿನ ದಿನಗಳಲ್ಲಿ ತುಂಬಾ ಅನಿವಾರ್ಯ ಕೂಡಾ. ಅಲ್ಲದೆ ಇಲ್ಲಿ ಹಮ್ಮಿಕೊಂಡಿರುವ ವಿವಿಧ ಚಟುವಟಿಕೆಗಳು ಕೂಡಾ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೊಂದಾಣಿಕೆ ಜೀವನ ಕೌಶಲಗಳು ಅನಾವರಣಗೊಳ್ಳುತ್ತದೆ ಎಂದು ನುಡಿದರು. ಆಯಾಯ ವಯೋಮಾನಕ್ಕೆ ತಕ್ಕಂತೆ ಗುಂಪು ಚಟುವಟಿಕೆಗಳು ಬುದ್ಧಿಭಾವ ವಿಕಾಸಕ್ಕೆ ಪೂರಕವಾಗಿದ್ದು ಸೃಜನಶೀಲತೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇಂತಹ ಶಿಬಿರಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ಪುರಸ್ಕಾರ ದೊರೆಯಬೇಕು ಕಳೆದ 10-15 ವರ್ಷಗಳಿಂದ ಮಕ್ಕಳ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಶಿಬಿರ ನಿರ್ದೇಶಕ ಶ್ರೀ ರಮೇಶ ವಕ್ವಾಡಿಯವರಿಗೂ ಇನ್ನಷ್ಟು ಪ್ರೋತ್ಸಾಹ ಪ್ರೇರಣೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಶ್ರೀ ಎಸ್. ನಾರಾಯಣ್ ಅಧ್ಯಕ್ಷರು ವಾರಂಬಳ್ಳಿ ಗ್ರಾಮ ಪಂಚಾಯತ್ ಬ್ರಹ್ಮಾವರ ಸಿ.ಎಚ್.ಪಿ ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರಾ ಹಾಗೂ ವಿದ್ಯಾರ್ಥಿ ನಾಯಕಿ ಕುಮಾರಿ ನಿಖಿತಾ, ಸಂಪನ್ಮೂಲ ತಂಡದ ಪರವಾಗಿ ಶ್ರೀ ರಮೇಶ್ ವಕ್ವಾಡಿ ಉಪಸ್ಥಿತರಿದ್ದರು. ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ರಾಘವೇಂದ್ರ ಆಚಾರ್ ನಿರೂಪಿಸಿ ಸುದರ್ಶನ್ ವಂದಿಸಿದರು.
ಈ ಮೂರು ದಿನಗಳ ಕಾಲ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಹೂದಾನಿ, ಮುಖವಾಡ, ಗ್ಲಾಸ್ಪೈಂಟಿಂಗ್ ಮತ್ತು ವಿವಿಧ ಕರಕುಶಲ ವಸ್ತುಗಳು ಎಲ್ಲರ ಮೆಚ್ಚುಗೆ ಗಳಿಸಿತು.