ಉಡುಪಿ : ಮೀನು ನೀರಿನಿಂದ ಆಕಾಶಕ್ಕೆ ನೆಗೆಯುತ್ತಿದೆ!. ಮೀನಿನ ದರ ಹಿಂದೆಂದಿಗಿಂತಲೂ ಈ ಋತುವಿನಲ್ಲಿ ದುಬಾರಿಯಾಗಿ ಮೀನು ಬಳಕೆದಾರರು, ಮೀನು ಪ್ರಿಯರಿಗೆ ಮೀನಿನ ಕೈಚೀಲ ಭಾರವಾಗುತ್ತಿದೆ. ಮೀನು ದುಬಾರಿಯಾಗಲು ವರ್ಷದಿಂದ ವರ್ಷಕ್ಕೆ ಮೀನಿನ ಲಭ್ಯತೆ ಕಡಿಮೆಯಾಗುತ್ತಿರುವುದು ಒಂದು ಕಾರಣವಾದರೆ, ಇನ್ನೊಂದು ಮುಖ್ಯ ಕಾರಣ ಇತ್ತೀಚೆಗೆ ಮಲ್ಪೆ ಮತ್ತು ಮಂಗಳೂರು ಮೀನುಗಾರಿಕಾ ಬಂದರಿನಿಂದ ದಿನನಿತ್ಯ ರಾಜ್ಯದ ಇತರ ಹಲವಾರು ಜಿಲ್ಲೆಗಳಿಗೂ ಮೀನು ಸಾಗಾಟ ನಡೆಯುತ್ತಿರುವುದು.
ಇಲ್ಲಿನ ಮೀನುಗಾರಿಕಾ ಬಂದರುಗಳಿಂದ ಪರ ರಾಜ್ಯ, ವಿದೇಶಗಳಿಗೆ ಹಲವು ವರ್ಷಗಳಿಂದ ಮೀನು ರಫ್ತಾಗುತ್ತಿದೆ. ಆದರೆ ಅದು ಸ್ಥಳೀಯವಾಗಿ ಮೀನಿನ ದರದ ಮೇಲೆ ಪರಿಣಾಮ ಬೀರಿರಲಿಲ್ಲ. ಯಾಕೆಂದರೆ ವಿದೇಶಗಳಿಗೆ ರಫ್ತಾಗುವ ಮೀನುಗಳು ಬೇರೆ ಇವೆ. ಅಂತೆಯೇ ಪಕ್ಕದ ರಾಜ್ಯಗಳಿಗೆ ಸರಬರಾಜಾಗುವ ಮೀನುಗಳು ಕೂಡ ಹೆಚ್ಚಾಗಿ ಸ್ಥಳೀಯ ಬಳಕೆಯ ಮೀನುಗಳಲ್ಲ. ಆದರೆ ಕಳೆದ 3-4 ವರ್ಷಗಳಿಂದ ಇಲ್ಲಿಂದ ಪ್ರತಿದಿನ ನೂರಾರು ಟನ್ ಮೀನು ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾಂ ಸೇರಿದಂತೆ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಸರಬರಾಜಾಗುತ್ತಿದೆ. ಇದು ಸ್ಥಳೀಯರ ಬಳಕೆಯ ಮೀನಿನ ಬೆಲೆಯ ಮೇಲೆ ಒಂದಷ್ಟು ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.
ಬೆಳಗ್ಗೆ ಮಲ್ಪೆ, ರಾತ್ರಿ ಬೆಂಗಳೂರು
ಈಗ ಮೀನು ಸಾಗಾಟಕ್ಕೆ ಅನುಕೂಲವಾದ ವಾಹನಗಳು, ಫೈಬರ್ ಬಾಕ್ಸ್ಗಳ ಲಭ್ಯತೆಯಿಂದಾಗಿ ಹೆಚ್ಚು ಹೆಚ್ಚು ಮೀನುಗಳು ಬೇರೆ ಜಿಲ್ಲೆಗಳಿಗೆ ರವಾನಿಸಲ್ಪಡುತ್ತಿವೆ. ಇದಕ್ಕೆ ಪೂರಕವಾಗಿ ಇತರೆ ಜಿಲ್ಲೆಗಳಲ್ಲಿಯೂ ಹೊಟೇಲ್, ಮನೆಗಳಲ್ಲಿ ಉಪಯೋಗಿಸಲು ಮೀನಿಗೆ ಬೇಡಿಕೆ ಹೆಚ್ಚುತ್ತಿದೆ. ಇಲ್ಲಿಂದ ಬೇರೆ ಜಿಲ್ಲೆಗಳಿಗೆ ಹೋದವರು ಅಲ್ಲಿಯೂ ಇಲ್ಲಿನ ಮೀನು ದೊರೆಯುವಾಗ ಖುಷಿ ಪಡುತ್ತಿದ್ದಾರೆ. ನಿರಂತರವಾಗಿ ಒದಗಿಸಲು ಬೇಡಿಕೆ ಇಡುತ್ತಿದ್ದಾರೆ. ಬೆಳಗ್ಗೆ ಇಲ್ಲಿಂದ ವಾಹನಗಳಲ್ಲಿ ಮೀನು ತುಂಬಿಸಿ ಹೊರಡುವ ವಾಹನಗಳು ರಾತ್ರಿ 12ರ ವೇಳೆಗೆ ಬೆಂಗಳೂರು ಅಥವಾ ಇತರೆ ಜಿಲ್ಲೆಗಳನ್ನು ತಲುಪುತ್ತವೆ. ಅದೇ ದಿನ ರಾತ್ರಿ ಅಲ್ಲಿನ ಮಾರುಕಟ್ಟೆಗಳಿಗೆ ಮೀನು ರವಾನೆಯಾಗುತ್ತದೆ. ಮರುದಿನ ಬೆಳಗ್ಗೆ ಅಲ್ಲಿ ಚಿಲ್ಲರೆ ಮಾರಾಟ ನಡೆಯುತ್ತದೆ. ಇದು ಪ್ರತಿದಿನವೂ ನಡೆಯುತ್ತದೆ. ಸ್ಥಳೀಯವಾಗಿ ಹೆಚ್ಚು ಉಪಯೋಗಿಸಲಾಗುವ ಬಂಗುಡೆ, ಕಾಣೆ, ಬೈಗೆ ಮೀನು, ಅಡೆಮೀನು, ಕಲ್ಲರ್ (ಕಲ್ಲೂರು), ಅಂಜಲ್ ಮೊದಲಾದ ಮೀನುಗಳು ಬೇರೆ ಜಿಲ್ಲೆಗಳಿಗೂ ಸರಬರಾಜಾಗುತ್ತಿವೆ. ಬೇಡಿಕೆಯೇ ಇರದಿದ್ದ ನಂಗ್ ಹೆಸರಿನ ಮೀನಿಗೆ ಇತ್ತೀಚೆಗೆ ಕೇರಳದಲ್ಲಿ ಹೆಚ್ಚಿನ ಬೇಡಿಕೆ ಬಂದಿರುವುದರಿಂದ ಅದು ಕೂಡ ದುಬಾರಿಯಾಗಿದೆ.
ವಿದೇಶಕ್ಕೆ ರಫ್ತಾಗುವ, ಮೀನುಗಾರರಿಗೆ ಉತ್ತಮ ಆದಾಯ ತಂದುಕೊಡುವ ಕಟ್ಲಫಿಶ್(ಕಪ್ಪೆ ಬಂಡಾಸ್)ಹೇಗೂ ಕಳೆದ ಕೆಲವು ವರ್ಷಗಳಿಂದ ಭಾರೀ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿವೆ. ತಮಿಳುನಾಡಿನ ಮೀನುಗಾರರು ಚೌರಿಯನ್ನು ಬಳಸಿ ಮೀನುಗಾರಿಕೆ ನಡೆಸುವುದು ಹಾಗೂ ಇತರ ಕಾರಣಗಳಿಂದ ಇದರ ಸಂತತಿ ಕಡಿಮೆಯಾಗುತ್ತಿದೆ. ಜಿಲ್ಲಾಡಳಿತ ಕಳೆದ ವರ್ಷ ಚೌರಿ ಬಳಸಿ ಮಾಡುವ ಮೀನುಗಾರಿಕೆ ನಿಷೇಧಿಸಿರುವುದರಿಂದ ಮುಂದಿನ ವರ್ಷದಿಂದ ಇದು ಹೆಚ್ಚಾಗಬಹುದೆಂಬ ನಿರೀಕ್ಷೆ ಇದೆ. ಆದರೆ ಬಂಗುಡೆ, ಬೂತಾಯಿ, ಅಂಜಲ್, ಮಾಂಜಿ ಮಾತ್ರವಲ್ಲದೆ ಮಿಕ್ಸ್ ಮೀನುಗಳು (ಪೊಡಿ ಮೀನ್) ಕೂಡ ಹೆಚ್ಚಿನ ಪ್ರಮಾಣದಲ್ಲಿ ಬಲೆಗೆ ಬೀಳುತ್ತಿಲ್ಲ. ಇವು ಸ್ಥಳೀಯರು ಹೆಚ್ಚಾಗಿ ಉಪಯೋಗಿಸುವ ಮೀನುಗಳು.
ಕೆಲವೇ ವರ್ಷಗಳ ಹಿಂದಿನವರೆಗೆ ಯಥೇತ್ಛವಾಗಿ ಅಗ್ಗದ ಬೆಲೆಗೆ ದೊರೆಯುತ್ತಿದ್ದ ಸಾಮಾನ್ಯ ಜಾತಿಯ ಮೀನುಗಳು ಕೂಡ ಇಂದು ಸುಲಭವಾಗಿ ಕೈಗೆಟುಕುತ್ತಿಲ್ಲ. ಈ ವರ್ಷದ ಸೀಸನ್ನಲ್ಲಿಯೇ ಮೀನಿನ ಈ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಹೆಚ್ಚು ತುಟ್ಟಿಯಾಯಿತು. ಒಂದೆಡೆ ಮಲ್ಪೆ ಬಂದರಿನಲ್ಲಿ ಬೋಟ್ಗಳು ತಂಗಲು ಸ್ಥಳಾವಕಾಶದ ಕೊರತೆಯಿಂದಾಗಿ ಕೆಲವು ಬೋಟ್ಗಳು ಬೇಗನೇ ಬಂದು ದಡ ಸೇರಿವೆ. ಇನ್ನೊಂದೆಡೆ ಪ್ರತಿವರ್ಷದಂತೆ ಈ ಬಾರಿಯೂ ಜೂ.15ರಿಂದ ಆಗಸ್ಟ್ 10ರವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ರಜೆ ದೊರೆಯಲಿದೆ. ಹಾಗಾಗಿ ಮುಂದಿನ ಎರಡು - ಮೂರು ತಿಂಗಳುಗಳಲ್ಲಿ ಮೀನು ಮತ್ತಷ್ಟು ದುಬಾರಿಯಾಗುವ ಸಾಮಾನ್ಯ ನಿರೀಕ್ಷೆ ಇದೆ. ಮೀನಿನ ರುಚಿ ಹೆಚ್ಚು ಹೆಚ್ಚು ಪಸರಿಸುತ್ತಿದ್ದಂತೆ ಅದು ಭಾರವಾಗುತ್ತಿದೆ.
ಒಂದು ಬಂಗುಡೆಗೆ 25, ಅಂಜಲ್ ಕೆ.ಜಿ.ಗೆ 500
ಇಲ್ಲಿನ ಮೀನು ಮಾರ್ಕೆಟ್ಗಳಲ್ಲಿ ದೊಡ್ಡ ಬಂಗುಡೆಯೊಂದು 20-25 ರೂ.ಗಳಿಗೆ ಬಿಕರಿಯಾಗುತ್ತಿದೆ (ಒಂದು ಕೆ.ಜಿ.ಯಲ್ಲಿ ಇಂತಹ 4-5 ಮೀನುಗಳು ಹಿಡಿಯುತ್ತವೆ.) ಈ ಭಾಗದಲ್ಲಿ ತುಂಬಾ ಅಗ್ಗದಲ್ಲಿ(ಕಡಿಮೆ ಬೆಲೆ)ದೊರೆಯುತ್ತಿದ್ದ ಬೈಗೆ ಮೀನಿನ(ಬೂತಾಯಿ)ಬೆಲೆಯೂ ಹೆಚ್ಚು. ಹಸಿಮೀನು ಮಾರಾಟಗಾರರು ನೀಡಿದ ಮಾಹಿತಿಯಂತೆ ಸದ್ಯ ಬೈಗೆ ಮೀನಿಗೆ 1-1.50 ರೂ., ಅಂಜಲ್ಗೆ ಒಂದು ಕೆ.ಜಿ.ಗೆ 500 ರೂ. ದರವಿದೆ.
ಬೆಲೆ ಕಡಿಮೆ ಮಾಡಿ
ಮೀನು ಯಾವ ಜಿಲ್ಲೆಗೆ, ಯಾವ ದೇಶಕ್ಕೂ ಬೇಕಾದರೂ ಹೋಗಲಿ. ಆದರೆ ಕರಾವಳಿಯಲ್ಲಿ ಮೀನಿನ ದರ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಮೀನಿಗೆ ದರ ಹೆಚ್ಚಾದರೆ ಕೆಲವರು ತರಕಾರಿಗೂ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹಾಗೆಯೇ ತರಕಾರಿಗೆ ಹೆಚ್ಚಾದರೆ ಮೀನಿಗೂ ಹೆಚ್ಚು ಮಾಡುವ ಸಾಧ್ಯತೆ ಇದೆ. ಇದು ಸರಿಯಲ್ಲ. ಮೀನು ಕೂಡ ಕೆಲವರಿಗೆ ಅಗತ್ಯದ ಆಹಾರ. ಜನಸಾಮಾನ್ಯರು ಇದನ್ನು ಬಳಸುತ್ತಾರೆ. ಹಾಗಾಗಿ ಒಂದೇ ಸಮನೆ ಬೆಲೆ ಹೆಚ್ಚಿಸುವುದು ಸಮರ್ಥನೀಯವಲ್ಲ
- ಸುಧಾಕರ್ ಕಿದಿಯೂರು, ಚಾಲಕರು.
ಮೀನಿನ ಸಂತತಿ ಕಡಿಮೆಯಾಗುತ್ತಿದೆ. ಬೇಡಿಕೆ ಹೆಚ್ಚಾಗುತ್ತಿದೆ. ಬೇರೆ ಜಿಲ್ಲೆಗಳಿಗೆ ಒಂದೊಂದು ವಾಹನದಲ್ಲಿ ಸುಮಾರು 1,500ದಿಂದ 2,000 ಕೆ.ಜಿ. ಮೀನುಗಳನ್ನು ವಾಹನದಲ್ಲಿ ಕೊಂಡೊಯ್ಯಲಾಗುತ್ತದೆ. ಹಲವು ಮಂದಿ ವ್ಯಾಪಾರಿಗಳು ಸೇರಿ ಒಂದು ವಾಹನದಲ್ಲಿ ಮೀನು ಸಾಗಿಸುವುದೂ ಇದೆ. ಮೀನಿನ ರುಚಿ ಬೇರೆಯವರಿಗೂ ಸಿಕ್ಕಿದೆ. ಹೊರ ಜಿಲ್ಲೆಯವರು ಬಂದು ಉತ್ತಮ ಬೆಲೆ ನೀಡುವಾಗ ಸ್ಥಳೀಯರು ಕೂಡ ಹೆಚ್ಚು ಬೆಲೆ ನೀಡುವುದು ಅನಿವಾರ್ಯವಾಗಿದೆ. ಹಿಂದಿಗಿಂತ ಈಗ ಬೆಲೆ ಹೆಚ್ಚಾಗಿರುವುದು ಹೌದಾದರೂ ಬೇರೆ ಜಿಲ್ಲೆಗಳಿಗಿಂತ ಇಲ್ಲಿನವರಿಗೆ ಸ್ವಲ್ಪವಾದರೂ ಕಡಿಮೆ ದರ ಬೀಳುತ್ತಿದೆ -
ಗೋಪಾಲ ಕುಂದರ್, ಅಧ್ಯಕ್ಷರು, ಆಳಸಮುದ್ರ ಬೋಟ್ ಮಾಲಕರ ಸಂಘ
ಮೀನು ಮಾರ್ಕೆಟ್ಗಳ ಸಂಖ್ಯೆ ಈಗ ಹೆಚ್ಚಾಗಿದೆ. ಹೆಚ್ಚು ಹೆಚ್ಚು ಜನ ಮೀನು ಕೊಳ್ಳುತ್ತಾರೆ. ಹಿಂದೆ ವಾಹನಗಳಲ್ಲಿ ಪ್ಲಾಸ್ಟಿಕ್ ಕವರ್ ಹಾಕಿ ಕೊಂಡೊಯ್ಯಬೇಕಿತ್ತು. ಈಗ ಫೈಬರ್ ಬಾಕ್ಸ್ಗಳು ಬಂದಿವೆ. ಅದರಲ್ಲಿ ಎಷ್ಟು ದೂರಕ್ಕೆ ಕೊಂಡು ಹೋದರೂ ಡ್ಯಾಮೇಜ್ ಆಗೋದಿಲ್ಲ. ಊರಿನವರು ಬೇರೆ ಬೇರೆ ಕಡೆ ಹೋಗಿ ನೆಲೆಸುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಮೀನು ಕಡಿಮೆ ದೊರೆಯುತ್ತಿದೆ. ಮಿಕ್ಸ್ಮೀನು ಹಿಂದೆ 10 ದಿನಕ್ಕೆ ಕನಿಷ್ಠ 60-70 ಬುಟ್ಟಿಯಾದರೂ ಸಿಗುತ್ತಿತ್ತು. ಈಗ ಕೇವಲ 10-15 ಬುಟ್ಟಿ ಮಾತ್ರ ಸಿಗುತ್ತಿದೆ. ಬಂದರ್ನಲ್ಲಿ ಮೀನಿನ ದರಕ್ಕೆ ಪೈಪೋಟಿ ಮಾಡಬೇಕಾಗುತ್ತಿದೆ-
ಬೇಬಿ ಎಚ್.ಸಾಲ್ಯಾನ್, ಅಧ್ಯಕ್ಷೆ, ಮಹಿಳಾ ಹಸಿಮೀನು ಮಾರಾಟಗಾರರ ಸಂಘ