ಉಡುಪಿ ಜಿಲ್ಲೆಯ ಮಾನವ ಹಕ್ಕು ಉಲ್ಲಂಘನೆಯ ಅಹಾವಾಲು ಸ್ವೀಕಾರ: ಯುಪಿಸಿಎಲ್ ವಿರುದ್ದ 2ಪ್ರಕರಣ ದಾಖಲು
gulfkannadiga.com
ಉಡುಪಿ: ಜಿಲ್ಲೆಯ ಮಾನವ ಹಕ್ಕು ಉಲ್ಲಂಘನೆಯ ಅಹಾವಾಲುಗಳನ್ನು ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ|. ಎಸ್.ಆರ್.ನಾಯಕ್ ಸಾರ್ವಜನಿಕರಿಂದ ಸೋಮವಾರ ಸ್ವೀಕರಿಸದರು. ಜಿಲ್ಲೆಯ ಒಟ್ಟು 6ಪ್ರಕರಣಗಳು ದಾಖಲಾಗಿದ್ದು ಮುಖ್ಯವಾಗಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ವಿರುದ್ದ 2ಪ್ರಕರಣಗಳು ದಾಖಲಾಗಿವೆ.
ಯುಪಿಸಿಎಲ್ ನಿಂದ ಕಳೆದ 20ವರ್ಷಗಳಿಂದ 10ಗ್ರಾಮಗಳು ತೊಂದರೆಯನ್ನು ಅನುಭವಿಸುತ್ತಿವೆ ಎಂದು ಎಲ್ಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಶಿಧರ್ ಶೆಟ್ಟಿ ದೂರು ನೀಡಿದರು. ಯಾವುದೇ ಪರವಾನಿಗೆ ಇಲ್ಲದೆ ನಡೆಸುತ್ತಿರುವ ಸ್ಥಾವರದ ಉಪ್ಪು ನೀರನ್ನು ನೇರವಾಗಿ ಕೃಷಿ ಭೂಮಿಗಳಿಗೆ ಬಿಡುವುದರಿಂದ ವ್ಯವಸಾಯ ಮಾಡಲು ಆಗುತ್ತಿಲ್ಲ. ಕುಡಿಯಲು ಯೋಗ್ಯವಾದ ನೀರು ದೊರಕುತ್ತಿಲ್ಲ. ಮಾತ್ರ ವಲ್ಲದೆ ಮಕ್ಕಳ, ವಿದ್ಯಾರ್ಥಿಗಳ, ಸ್ಥಳಿಯರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಆ ಪ್ರದೇಶದ ಜನರ ಮಾನವ ಹಕ್ಕಿನ ಜೊತೆಗೆ ಬದುಕುವ ಹಕ್ಕನೇ ಸ್ಥಾವರದವರು ಕಸಿದುಕೊಂಡಿದ್ದಾರೆ ಎಂದು ದೂರಿದರು.
ಯುಪಿಸಿಎಲ್ ನಿಂದ ತಾಜ್ಯ ನೀರನ್ನು ಪೈಪ್ ಲೈನ್ ಮುಖಾಂತರ ನೇರವಾಗಿ ಸಮುದ್ರಕ್ಕೆ ಬಿಡುವುದರಿಂದ ಮೀನುಗಳ ಸಂತತಿ ನಾಶವಾಗುತ್ತಿದ್ದು ಕೈರಂಪಣಿಯಲ್ಲಿ ಮೀನುಗಾರಿಕೆಗೆ ತೊಂದರೆಯಾಗುತ್ತಿದೆ ಎಂದು ಎರ್ಮಾಳು ಭರತ್ ಕುಮಾರ್ ದೂರು ನೀಡಿದರು. ಇದರಿಂದ ಮೀನುಗಾರರು ಕಷ್ಟ ಅನುಭವಿಸುತ್ತಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಜಿಲ್ಲಾಧಿಕಾರಿಗಳಿಂದ ನೊಂದ ಮೀನುಗಾರಿಕ ಕುಟುಂಬಕ್ಕೆ ಪರಿಹಾರ ಒದಗಿಸಲು ಕಂಪನಿಯವರಿಗೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳು ಗುರುತಿಸಿದ 302ಜನ ಫಲಾನುಭವಿಗಳಿಗೆ ಕಂಪನಿಯಿಂದ ಯಾವುದೇ ಪರಿಹಾರ ದೊರಕ್ಕಿಲ್ಲ ಎಂದು ದೂರಿದರು.
ಕೆಮ್ಮಣ್ಣು ಗ್ರಾಮಪಂಚಾಯತಿ ವ್ಯಾಪ್ತಿಯ ಪಡುತೋನ್ಸೆಯಲ್ಲಿ ರಸ್ತೆ ಮಾಡಲು ಜಾಗ ನೀಡಿದ್ದು ಈಗ ಸೇತುವೆ ನಿರ್ಮಿಸಲು ಕೂಡ ಪಂಚಾಯತ್ ಆಡಳಿತ ಜಾಗವನ್ನು ಅಕ್ರಮಿಸಿದ್ದಾರೆ. ತನಗೆ ಯಾವುದೇ ಗಮನಕ್ಕೆ ತಾರದೆ ಸೇತುವೆ ರಸ್ತೆ ನಿರ್ಮಿಸಿ ದೌರ್ಜನ್ಯ ನೀಡುತ್ತಿದ್ದಾರೆ ಎಂದು ಪಡುತೋನ್ಸೆಯ ರಿಚಾರ್ಡ್ ಲೂಯಿಸ್ ದೂರು ನೀಡಿದ್ದಾರೆ.
ಮಲ್ಪೆ ಬಂದರಿನಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ವಂಚನೆ ಆಗುತ್ತಿದೆ. ಅವರಲ್ಲಿ ಯಾವುದೇ ದಾಖಲೆ ಪತ್ರ ಇಲ್ಲವಾಗಿದ್ದು ಅಧಿಕಾರಿಗಳು ಶಿಕ್ಷಣ ನೀಡಲು ದಾಖಲೆ ಪತ್ರ ಕೇಳುತ್ತಿದ್ದಾರೆ ಎಂದು ಫ್ರೆಂಡ್ಸ್ ಕ್ಲಬ್ ನ ಗುರುರಾಜ್ ಸಾಲಿಯಾನ್ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಆಯೋಗದ ಅಧ್ಯಕ್ಷರು ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ೬ ವರ್ಷದಿಂದ ೧೪ ವರ್ಷದ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಸಂವಿಧಾನದಲ್ಲಿ ಬದಲಾವಣೆಯಾಗಿದೆ. ಈ ಕುರಿತು ಮುಖ್ಯಕಾರ್ಯನಿರ್ವಾಹಣ ಅಧಿಕಾರಿಗಳು ಗಮನ ಹರಿಸಬೇಕು ಎಂದರು. ಈಗಾಗಲೇ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಮಕ್ಕಳಿಗೆ ಅಶ್ರಮ ಶಾಲೆಗೆ ಸೇರಿಸುವ ಆಂದೋಲನ ಆರಂಭಮಾಡಲಾಗಿದೆ. ಮಕ್ಕಳಿಗೆ ವಿದ್ಯಾಭ್ಯಾಸದ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಆಂದೋಲನ ಜೂ.23ರ ತನಕ ನಡೆಯಲಿದೆ ಎಂದು ಮುಖ್ಯಕಾರ್ಯನಿರ್ವಾಹಣ ಅಧಿಕಾರಿ ಪ್ರಭಾಕರ್ ಶರ್ಮಾ ಪ್ರತಿಕ್ರಿಯಿಸಿದರು.
ಹೊಸ ಮನೆ ಕಟ್ಟಿ ಮನೆಗೆ ವಿದ್ಯುತ್ ಸಂಪರ್ಕ ನೀಡಲು ನಿರಪೇಕ್ಷಣ ಪತ್ರವನ್ನು ಐರೋಡಿ ಗ್ರಾ.ಪಂ. ನಲ್ಲಿ ಮನವಿ ಮಾಡಲಾಗಿದ್ದು ಪಂಚಾಯತ್ ಆಡಳಿತ ಹಾಗೂ ಪಿಡಿಒ ಅಧಿಕಾರಿಗಳು ವಿದ್ಯುತ್ ಸಂಪರ್ಕಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಹಂಗಾರಕಟ್ಟೆಯ ರಫೀಕ್ ದೂರು ನೀಡಿದ್ದಾರೆ.೨೦೦೭ರಲ್ಲಿ ಹೋಮ್ ಗಾರ್ಡ್ ಕಮಾಂಡೆಂಟ್ ಆಗಿ ರಾಜಕೀಯವಾಗಿ ನೇಮಕ ಮಾಡಲಾಗಿದೆ. ಈ ಕುರಿತು ಉಚ್ಚ ನ್ಯಾಯಾಲಯದಲ್ಲಿ ಡಿಐಜಿ ಗೆ ದೂರು ನೀಡಲು ತಿಳಿಸಿದ್ದು 16.7.2007ರಂದು ದೂರು ನೀಡಿದರೂ ಇದಕ್ಕೆ ಉತ್ತರ ಬರಲಿಲ್ಲ ಎಂದು ಉಡುಪಿ ವಕೀಲ ಸದಾಶಿವ ಕೆ.ಅಮೀನ್ ದೂರಿದ್ದಾರೆ. ಇದಕ್ಕೆ ಪ್ರತಿಯಾಗಿ ಅಧ್ಯಕ್ಷರು ಈ ಕುರಿತು ಡಿಜಿಪಿಗೆ ದೂರು ನೀಡಲು ತಿಳಿಸಿದ್ದಾರೆ.
ರಸ್ತೆಯಲ್ಲಿ ಮೀನು ಲಾರಿಗಳಿಂದ ತಾಜ್ಯ ನೀರು ಹೊರಹಾಲ್ಪಟ್ಟಿದ್ದು ಇದರಿಂದ ಅನೇಕ ಸಾವು ನೋವುಗಳು ಸಂಭವಿಸಿದೆ. ಈ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದ್ದು ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲಿಲ್ಲ. ಮಾತ್ರವಲ್ಲದೆ ರಾಜ್ಯಕ್ಕೆ ಮಾದರಿ ಎನಿಸಿಕೊಂಡಿರುವ ಉಡುಪಿ ಜಿಲ್ಲಾ ನೂತನ ಜಿಲ್ಲಾ ಸಂಕೀರ್ಣವಾಗಿ 6ತಿಂಗಳಾದರೂ ಸರಿಯಾದ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಅಧ್ಯಕ್ಷರು ಈ ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಅನೇಕ ದೊಡ್ಡ ಕಟ್ಟಡಗಳು ಗಗನ ಚುಂಬಿಯಂತೆ ಬೆಳೆದಿದ್ದು ಅಲ್ಲಿನ ಜನರಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಜನ ತೀರಾ ಕುಡಿಯುವ ನೀರಿನಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ದೂರುಗಳು ಆಯೋಗಕ್ಕೆ ಬಂದಿವೆ. ಬೋರ್ ವೆಲ್ ನೀರನ್ನು ಕುಡಿಯಲು ಬಳಸಲು ಸಾಧ್ಯವಿಲ್ಲ. ಮನುಷ್ಯನಿಗೆ ಅನ್ನಕ್ಕಿಂತ ಮೊದಲು ನೀರಿನ ಅವಶ್ಯಕತೆ ಇದೆ. ಈ ಸಮಸ್ಯೆಯನ್ನು ಪರಿಹರಿಸಲು ಮಳೆ ನೀರಿನ ಕೊಯ್ಲು ಕಾರ್ಯಕ್ರಮವನ್ನು ಮಾಡಬೇಕು ಎಂದು ಪೌರಾಯುಕ್ತ ಹಾಗೂ ಸಿಇಒ ಅವರಿಗೆ ಅಧ್ಯಕ್ಷರು ಸೂಚನೆ ನೀಡಿದರು.
ಬಳಿಕ ರಾಜ್ಯದಲ್ಲಿ ದಾಖಲಾದ ಮಾನವ ಹಕ್ಕು ಉಲ್ಲಂಘನೆ ಪ್ರಕರಣವನ್ನು ತಿಳಿಸಿದ ಅವರು, ಅಕ್ಟೋಬರ್ 2007ರಿಂದ ಮಾರ್ಚ್ 2012ರ ತನಕ ಆಯೋಗದಲ್ಲಿ 33,064 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 6,065ಪ್ರಕರಣಗಳನ್ನು ಮಾಧ್ಯಮ ವರದಿ ಆಧಾರಿತವಾಗಿ ಆಯೋಗವು ಸ್ವಯಂ ಪ್ರೇರುತವಾಗಿ ದಾಖಲು ಮಾಡಿಕೊಂಡಿದೆ. ಇದರಲ್ಲಿ 22,012 ಪ್ರಕರಣಗಳು ಇತ್ಯರ್ಥಗೊಂಡಿದ್ದು 11,052 ಪ್ರಕರಣಗಳು ಬಾಕಿ ತೀರ್ಮಾನದಲ್ಲಿ ಉಳಿದಿದೆ ಎಂದರು.
ಜಿಲ್ಲೆಯಲ್ಲಿ ಈ ಅವಧಿಯಲ್ಲಿ 579 ಪ್ರಕರಣ ದಾಖಲುಗೊಂಡಿದ್ದು 363 ಪ್ರಕರಣ ಇತ್ಯರ್ಥಗೊಂಡಿವೆ 216ಪ್ರಕರಣ ಬಾಕಿ ತೀರ್ಮಾನದಲ್ಲಿದೆ. ಅದೇರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1588 ಪ್ರಕರಣ ದಾಖಲಾಗಿದ್ದು 952ಇತ್ಯರ್ಥಗೊಂಡಿವೆ ಇನ್ನು 636ಪ್ರಕರಣಗಳು ಬಾಕಿ ತೀರ್ಮಾನದಲ್ಲಿ ಉಳಿದಿದೆ ಎಂದು ಹೇಳಿದರು.ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಸದಾಶಿವ ಪ್ರಭು ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ವೆಂಕಟೇಶಪ್ಪ ಅವರು ಉಪಸ್ಥಿತರಿದ್ದರು.
Please fill in the form below with correct details
* mark fields are compulsory
|
|
Comments on this article:0
|
|
|
|